ಉಸುಬಿನ ನೊಣದ ಜ್ವರ 

	ಉಸುಬಿನ ನೊಣ ಹರಡುವ ಒಂದು ಬಗೆಯ ವಿಷಕಣದಿಂದ (ವೈರಸ್) ಬರುವ ಜ್ವರ (ಸ್ಯಾಂಡ್‍ಫ್ಲೈ ಫೀವರ್). ಮೂರರಿಂದ ಐದು ದಿನಗಳವರೆಗೆ ಜ್ವರವಿರುತ್ತದೆ. ಕೆಂಪೇರಿದ ಮುಖ, ನೀರು ತುಂಬಿದ ಕಣ್ಣುಗಳು, ಕೀಲು ಬೆನ್ನು ಕೈಕಾಲುಗಳಲ್ಲಿ ನೋವು, ತಲೆ ನೋವು-ಇವು ರೋಗ ಲಕ್ಷಣಗಳು. ಜ್ವರ ಇದ್ದಕ್ಕಿದ್ದ ಹಾಗೆ 40.5ಲಿಅ(105ಲಿಈ)ಗೆ ಏರಬಹುದು. ಚಳಿ, ನಡುಕ ಸಾಮಾನ್ಯ. ಜ್ವರ ಇಳಿಯುವಾಗ ಮೈಯೆಲ್ಲ ವಿಪರೀತ ಬೆವರುತ್ತದೆ. ರೋಗಿ ನಿತ್ರಾಣಿಯಾಗುವನು, ಚೇತರಿಸಿಕೊಳ್ಳುವುದು ನಿಧಾನ. ಬೆಳಕಿಗೆ ಕಣ್ಣುಬಿಡದಂತಾಗಿ ಕಣ್ಣೀರು ಸುರಿವುದು, ಮಂಕುತನ, ಹಸಿವುನಾಶ, ಓಕರಿಕೆ, ಕೆಲವೇಳೆ ವಾಂತಿ ಇರಬಹುದು. ಈ ರೋಗ ಸಾಮಾನ್ಯವಾಗಿ ಮಾರಕವಲ್ಲ. ಸೊಳ್ಳೆ ನಿರೋಧಕ ಮದ್ದುಗಳ ಸಿಂಪಡಿಕೆಯಿಂದ ಇದರ ಹಾವಳಿ ಬಹುಮಟ್ಟಿಗೆ ಅಡಗಿದೆ. ಭೂಮಧ್ಯಸಮುದ್ರದ ಕರಾವಳಿ, ಈಜಿಪ್ಟ್, ಪ್ಯಾಲಿಸ್ಟೈನ್, ಇರಾಕ್, ಸಿರಿಯ, ಭಾರತದ ಈಶಾನ್ಯ ರಾಜ್ಯಗಳು, ಮಧ್ಯ ಅಲ್ಲವೆ ದಕ್ಷಿಣ ಅಮೆರಿಕಗಳಲ್ಲಿ ಈ ರೋಗ ಸ್ಥಾನಿಕವೆನಿಸಿದೆ (ಎಂಡೆಮಿಕ್). ಭಾರತದಲ್ಲಿ ಮುಖ್ಯವಾಗಿ ಗಿರಿಜನರಾದ ಗೂರ್ಖ, ಡೋಗ್ರ ಜನರಲ್ಲಿ ಹೆಚ್ಚು.

	ಸಾಮಾನ್ಯವಾಗಿ, ವಸಂತ, ಶರತ್ಕಾಲಗಳಲ್ಲಿ ಈ ರೋಗ ಕಾಣಿಸಿಕೊಳ್ಳುವುದು. ಕೆಲವೇಳೆ, ಬೇಸಗೆಯಲ್ಲಿ ಇದು ಸಾಂಕ್ರಾಮಿಕವಾಗಬಹುದು. ಇದ್ದಕ್ಕಿದ್ದಂತೆ ಜ್ವರ ಸಿಡಿವಂತೆ ಹರಡಿಕೊಳ್ಳುವುದುಂಟು. ಒಂದು ಬಾರಿ ಜ್ವರ ಬಂದು ಹೋದರೆ, ಕೆಲಕಾಲವಾದರೂ ಮತ್ತೆ ಬಾರದು. ಸ್ಥಾನಿಕವಾಗಿ ರೋಗವಿರುವ ಊರಿಗೆ ಹೊಸದಾಗಿ ಬಂದವರಿಗೆ ಸುಲಭವಾಗಿ ಹತ್ತುತ್ತದೆ. ರೋಗಕ್ಕೆ ಆಸರೆ ಇನ್ನೊಬ್ಬ ರೋಗಿಯೆ ಹೊರತು, ಬೇರೆ ಪ್ರಾಣಿಗಳಲ್ಲ, ಆರೋಗ್ಯವಂತರೂ ಅಲ್ಲ. 

	ರೋಗ ಹೊಮ್ಮುವ ಅವಧಿ (ಇಂಕ್ಯುಬೇಷನ್ ಪೀರಿಯಡ್) 5-7 ದಿನಗಳು. ಜ್ವರದ ಹಿಂದಿನ ದಿನ. ಆಮೇಲಿನ 1-2 ದಿನಗಳು ಮಾತ್ರ ವಿಷಕಣಗಳು ರಕ್ತದಲ್ಲಿರುವುವು. ಆಗ ಉಸುಬಿನ ನೊಣ ರೋಗಿಯ ರಕ್ತ ಹೀರಿದ್ದರೆ ಮಾತ್ರ ಅದರಿಂದ ಇನ್ನೊಬ್ಬರಿಗೆ ಹರಡಬಹುದು. ಒಂದು ಬಾರಿ ಸೋಂಕಿನ ವಿಷಕಣಗಳು ಈ ನೊಣದಲ್ಲಿ ಸೇರಿಬಿಟ್ಟರೆ, ವಾರ ಕಳೆದ ಮೇಲೆ ಬೇರೆಯವರಿಗೆ ಸೋಂಕು ಅಂಟಿಸುವಂತಾಗುತ್ತದೆ. ಆಮೇಲೆ ಆ ನೊಣ ಸಾಯುವತನಕ ಸೊಂಕು ಹತ್ತಿಸುತ್ತಲೇ ಇರುವುದು. ಈ ನೊಣಗಳು ಹೆಚ್ಚು ದೂರ ಹಾರಲಾರವು. ಸುಮಾರು 100 ಮೀಟರು ಒಳಗೇ ಇಡೀ ಬಾಳನ್ನು ಕಳೆಯುತ್ತವೆ. ಬಹುಮಟ್ಟಿಗೆ ನೆರಳು, ಕತ್ತಲುಗಳಲ್ಲಿ, ಬೆಚ್ಚಗೆ ತಂಪಾಗಿರುವ ಸಂದುಗಳಲ್ಲಿ ವಾಸಿಸುತ್ತವೆ. ಹೆಣ್ಣು ನೊಣಗಳು ಮಾತ್ರ ಸೊಂಕು ಅಂಟಿಸುವುವು. ಉಸುಬಿನ ನೊಣಗಳಲ್ಲಿ ಫ್ಲೆಬೊಟೊಮಸ್ ಪಪ್ಪಾಟಾಸಿಯೈ ಜಾತಿಯದು ಮಾತ್ರ ಈ ರೋಗ ಹರಡುತ್ತದೆ.

	ಪ್ರಯೋಗಾಲಯ ಪರೀಕ್ಷೆಯಿಂದ ಈ ರೋಗವನ್ನು ಖಚಿತಗೊಳಿಸಬಹುದು. ಕೇವಲ ರೋಗ ಲಕ್ಷಣಗಳಿಂದ ಗುರುತಿಸಬೇಕು. ಸಾಂಕ್ರಾಮಿಕದಲ್ಲಿ ಗುರುತಿಸುವುದು ಸುಲಭವಾದರೂ ಕೆಲವೇಳೆ ಉರಿಶೀತ (ಇನ್‍ಫ್ಲೂಯೆಂಜû), ಡೆಂಗೆ ಜ್ವರಗಳೆಂದು ತಪ್ಪು ತಿಳಿಯುವುದುಂಟು. ಇದರಲ್ಲಿ ರಕ್ತದ ಬಿಳಿಕಣಗಳು ಕುಗ್ಗಿರುವುವಲ್ಲದೆ ಮೈಮೇಲೆ ದದ್ದುಗಳು ಏಳವು.

	ಬಹುಕಾಲ ಉಳಿವ ಕೀಟನಾಶಕಗಳನ್ನು ಸಿಂಪಡಿಸಿ ಈ ನೊಣಗಳು ಬೆಳೆಯದಂತೆ ಮಾಡಿ ಸಾಯಿಸಬೇಕು. ರಾತ್ರಿ ಹೊತ್ತು ಇವುಗಳ ಚಟುವಟಿಕೆ ಬಲು ಜೋರು. ಬಟ್ಟೆ ಮುಚ್ಚಿರುವ ಚರ್ಮಕ್ಕೆ ಅತಿಗಂಧದ (ಸಿಟ್ರೊನೆಲ್ಲ) ಎಣ್ಣೆಯಿರುವ ಮುಲಾಮನ್ನು ಹಚ್ಚಿಕೊಂಡರೆ ಈ ನೊಣಗಳು ಕಚ್ಚವು. ಪಂಕ ಬೀಸಣಿಗೆಗಳಿಂದ ಗಾಳಿಯಾಡುತ್ತಿದ್ದರೆ ನೊಣಗಳು ಹತ್ತಿರ ಸುಳಿಯವು. ಸಾಮಾನ್ಯ ಸೊಳ್ಳೆ ಪರದೆಗಳ ಮೂಲಕ ಈ ನೊಣಗಳು ಸುಲಭವಾಗಿ ತೂರಿಬಿಡುತ್ತವೆ. ಆದ್ದರಿಂದ ಚದರಂಗುಲಕ್ಕೆ 45 ಕಣ್ಣುಗಳಿರುವ ಬಲೆಯನ್ನು ಬಳಸಬೇಕು. ಇದು ತೆಳ್ಳನೆಯ ಬಟ್ಟೆಯಂತೆ ಇರುವುದರಿಂದ ಒಳಗಡೆ ಗಾಳಿಯಾಡದೆ ಹಿತವೆನ್ನಿಸದು. ರೋಗಿಗಳಾದರು ಇದನ್ನು ಬಳಸಬೇಕು.

	ಚಿಕಿತ್ಸೆಗೆ, ರೋಗ ಲಕ್ಷಣ ಶಮನ ವಿಧಾನಗಳ ಹೊರತು, ರೋಗಾಣುವನನ್ನು ಅಡಗಿಸುವ ಮದ್ದುಗಳೇ ಇಲ್ಲ. 
(ನೋಡಿ- ಉಸುಬಿನ-ನೊಣ)	
             (ಎಚ್.ಎಸ್.ಎಸ್.ಎಸ್.; ಆರ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ